ಆರೋಪಿ `ಕಿರಿಕ್’ ಇನ್ಸ್ ಪೆಕ್ಟರ್ ನೇಮಿರಾಜ್ ಎತ್ತಂಗಡಿ ; ಅಧಿಕಾರ ಸ್ವೀಕರಿಸಿದ ರಾಜಣ್ಣ
ಮೈಸೂರು : ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದ ಯುವಕನನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ನಡೆಸಿದ ಆರೋಪದ ಮೇಲೆ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ನೇಮಿರಾಜ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಮೊದಲ ಹಂತವಾಗಿ ಆರೋಪಿ ಸರ್ಕಲ್ ಇನ್ಸ್ ಪೆಕ್ಟರ್ ನೇಮಿರಾಜ್ ನನ್ನು ಗ್ರಾಮಾಂತರ ಪೊಲೀಸ್ ಠಾಣೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
ಮೈಸೂರು ತಾಲೊಕು ದೊಡ್ಡಕಾನ್ಯ ಗ್ರಾಮದ ನಿರುದ್ಯೋಗಿ ಯುವಕ , ಎಂಬಿಎ ಪದವೀಧರ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ್ದಾತ. ಈತನಿಗೆ ಉದ್ಯೋಗ ಕೊಡಿಸುವುದಾಗಿ ಗ್ರಾಮಾಂತರ ಠಾಣೆಯ ಪೇದೆ ಮಹಾದೇವ್ ಎಂಬಾತ ಹಣ ಪಡೆದು ವಂಚಿಸಿದ್ದ. ಈ ಸಂಬಂಧ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿ ಅಪೋಲೋ ಆಸ್ಪತ್ರೆಗೆ ಸೇರಿದ್ದ. ಚಿಕಿತ್ಸೆ ಪಡೆದು ಬಿಡುಗಡೆಗೊಂಡ ದಿನವೇ ಆತನನ್ನು ಠಾಣೆಗೆ ಕರೆತಂದು ಪೇದೆವಿರುದ್ಧ ನೀಡಿರುವ ದೂರು ಹಿಂಪಡೆಯುವಂತೆ ಬಲವಂತಪಡಿಸಲಾಗಿತ್ತು. ಜತೆಗೆ ಈ ಕಾರಣಕ್ಕಾಗಿಯೇ ಮಂಜುನಾಥ್ ಮೇಲೆ ಇನ್ಸ್ ಪೆಕ್ಟರ್ ನೇಮಿರಾಜ್ ಹಲ್ಲೆ ಸಹ ನಡೆಸಿದ್ದರು ಎನ್ನಲಾಗಿದೆ.
* ತನಿಖೆಗೆ ಆದೇಶಿಸಿದ ಎಸ್ಪಿ :
ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್ ಸೂಚಿಸಿದ್ದಾರೆ. ಘಟನೆ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಪೇದೆ ಮಹಾದೇವ್ ನನ್ನು ಅಮಾನತ್ತುಗೊಳಿಸಿ ಇಲಾಖಾತನಿಖೆಗೆ ಆದೇಶಿಸಲಾಗಿದೆ. ಇದೇ ರೀತಿ ಸರ್ಕಲ್ ಇನ್ಸ್ ಪೆಕ್ಟರ್ ನೇಮಿರಾಜ್ ವಿರುದ್ಧವೂ ಕ್ರಮಕ್ಕೆ ಮುಂದಾಗಿರುವ ಎಸ್ಪಿ ದಿಲೀಪ್ , ಆರೋಪಿ ಇನ್ಸ್ ಪೆಕ್ಟರ್ ಅವರನ್ನು ಗ್ರಾಮಾಂತರ ಠಾಣೆಯಿಂದ ಎಸ್ಪಿ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ. ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಿದ್ದಾರೆ.
- ರಾಜಣ್ಣಗೆ ಚಾರ್ಜ್ :
ಮೈಸೂರು ಗ್ರಾಮಾಂತರ ಠಾಣೆ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ರಾಜಣ್ಣಗೆ ಅಧಿಕಾರವಹಿಸಲಾಗಿದೆ. ಶುಕ್ರವಾರ ಸಂಜೆ ಈ ಆದೇಶ ಹೊರಬಿದ್ದಿದೆ. ಆರೋಪಿ ಇನ್ಸ್ ಪೆಕ್ಟರ್ ನೇಮಿರಾಜ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಆದ್ದರಿಂದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ.





0 Comments
You can be the first one to leave a comment.