ಬೆಂಗಳೂರು: ದೇಶೀಯ ಜಂಬು ನೇರಳೆ ತಳಿಗಿಂತ 4 ವರ್ಷ ಮೊದಲೇ ಫ‌ಲ ನೀಡುವ ಮತ್ತು ಹೆಚ್ಚು ರುಚಿಯಾದ ಸುಧಾರಿತ ಹೊಸ ತಳಿ “ಚಿಂತಾಮಣಿ ಸೆಲೆಕ್ಷನ್‌-1′ ತಳಿಗೆ ಈಗ ಎಲ್ಲಿಲ್ಲದ ಬೇಡಿಕೆ.

ದಶಕಗಳ ಕಾಲ ಸಂಶೋಧನೆಗೆ ಒಳಪಡಿಸಿ, ದೇಶೀಯ ತಳಿಗಿಂತ ಈ ಸುಧಾರಿತ ತಳಿ ಉತ್ತಮವಾಗಿದೆ ಎಂಬುದು ಖಾತರಿಯಾದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಚಿಂತಾಮಣಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಳ್ಳಾರಿ ಸೇರಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ “ಚಿಂತಾಮಣಿ ಸೆಲೆಕ್ಷನ್‌-1′ ಜಂಬು ನೇರಳೆ ತಳಿಯನ್ನು ರೈತರು ಬೆಳೆಯುತ್ತಿದ್ದಾರೆ.

10 ವರ್ಷ ಸಂಶೋಧನೆ: ಚಿಂತಾಮಣಿಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಪಿ. ವೆಂಕಟರಮಣ ಮತ್ತು ಎಂ.ಲಕ್ಷಣ್‌ ಅವರು “ಚಿಂತಾಮಣಿ ಸೆಲೆಕ್ಷನ್‌-1′ ಎಂಬ ಹೊಸ ಜಂಬು ನೇರಳೆ ತಳಿಯನ್ನು ಅಭಿವೃದ್ಧಿ ಪಡಿಸಿದ್ದು, ಸುಮಾರು 10 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದರು. ಈ ಹಿಂದೆ ಜಂಬು ನೇರಳೆಯನ್ನು ಬೀಜದಿಂದ ಸಸಿ ಮಾಡಿ ನಾಟಿ ಮಾಡುವಂತಹ ಪದ್ಧತಿ ಅನುಸರಿಸಲಾಗುತ್ತಿತ್ತು. ಇದರಿಂದ ಸಸಿಗಳು ಫ‌ಲ ನೀಡಲು ಸುಮಾರು 8 ರಿಂದ 10 ವರ್ಷಗಳೇ ಬೇಕಾಗುತ್ತಿತ್ತು. ಆದರೆ, ಈಗ ಜಂಬು ನೇರಳೆಗೆ ಎಲ್ಲಿಲ್ಲದ ಬೇಡಿಕೆಯಿದ್ದು, ವಾಣಿಜ್ಯ ಬೆಳೆಯಾಗಿ ಅಭಿವೃದ್ಧಿ ಹೊಂದುತ್ತಿದೆ. ಪ್ರತಿ ಕೆಜಿ ಜಂಬು ನೇರಳೆ 90ರಿಂದ 150 ರೂ.ವರೆಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಚಿಂತಾಮಣಿ ಸೆಲೆಕ್ಷನ್‌-1: ವಿಜ್ಞಾನಿಗಳಾದ ವೆಂಕಟರಮಣ, ಲಕ್ಷ್ಮಣ್‌ ಅವರು, ಚಿಂತಾಮಣಿಯ ಬುರುಡಗುಂಟೆ ಹಳ್ಳಿಯಲ್ಲಿ ತಾಯಿ ಮರದಿಂದ ರೆಂಬೆ ಕಟಾವು ಮಾಡಿ ಬೇರೆ ತಾಯಿ ಬೇರು ಸಸಿಗಳಿಗೆ ಕಸಿ (ನಿರ್ಲಿಂಗ ಪದ್ಧತಿಯಲ್ಲಿ
ವಂಶಾಭಿವೃದ್ಧಿ)ಮಾಡಿ, ಸುಮಾರು 4 ವರ್ಷ ಪರಿಶೀಲನೆ ನಡೆಸಿದ್ದರು. ಕಸಿ ಮಾಡಿದ ಈ ಸಸಿಗಳು ಬೆಳೆದು ಮರಗಳಾದ ನಂತರ ಹೂವು ಬಿಟ್ಟು ಕಾಯಿಯಾದ ಬಳಿಕ, ಇತರ ಜಂಬು ನೇರಳೆಗೂ ಈ ಸುಧಾರಿತ ತಳಿಯ ಹಣ್ಣುಗಳಿಗೂ ಇರುವ ವ್ಯತ್ಯಾಸ, ರುಚಿ, ಪೌಷ್ಠಿಕ ಅಂಶಗಳನ್ನು ಪರೀಕ್ಷೆಗೆ ಒಳಪಡಿಸಿದ ಮೇಲೆ ಈ ತಳಿಗೆ “ಚಿಂತಾಮಣಿ
ಸೆಲೆಕ್ಷನ್‌-1′ ಎಂಬ ಹೆಸರು ಕೊಟ್ಟಿದ್ದಾರೆ.

ತಳಿಯ ವೈಶಿಷ್ಟ: ಸಾಮಾನ್ಯವಾಗಿ ಇತರ ಮರಗಳು 8 ರಿಂದ 10 ವರ್ಷಕ್ಕೆ ಇಳುವರಿ ನೀಡಲು ಆರಂಭಿಸಿದರೆ, ಈ ಸುಧಾರಿತ ತಳಿಗಳು ನಾಟಿ ಮಾಡಿದ 4-5 ವರ್ಷಗಳಲ್ಲೇ ಹಣ್ಣು ನೀಡಲು ಪ್ರಾರಂಭಿಸುತ್ತವೆ. ಪ್ರತಿ ಹಣ್ಣಿನ ತೂಕ 16-18
ಗ್ರಾಂ ನಷ್ಟಿರುತ್ತದೆ. ಸುಮಾರು 3 ಇಂಚುಗಳಷ್ಟು ಉದ್ದವಾಗಿದ್ದು, ಹಣ್ಣಿನ ಶೇ.85-90ರಷ್ಟು ಭಾಗ ತಿರುಳಿನಾಂಶವನ್ನು ಹೊಂದಿರುತ್ತದೆ. ಇತರೆ ತಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ 15ಬ್ರಿಕ್ಸ್‌ ಕರಗುವ ಸಕ್ಕರೆ ಅಂಶವನ್ನು ಹೊಂದಿದೆ ಎಂದು
ವಿಜ್ಞಾನಿ ವೆಂಕಟರಮಣ ಮಾಹಿತಿ ನೀಡಿದ್ದಾರೆ. ಬುರುಡಗುಂಟೆ ಹಳ್ಳಿಯಲ್ಲಿ ದೊರೆತ ಜಂಬು ನೇರಳೆ ತಳಿಯನ್ನು ನಾಟಿ ನೇರಳೆ ತಳಿಯೊಂದಿಗೆ ನಿರ್ಲಿಂಗ ಪದ್ಧತಿಯಲ್ಲಿ ವಂಶಾಭಿವೃದ್ಧಿ ಮಾಡಿದ್ದು “ಚಿಂತಾಮಣಿ ಸೆಲೆಕ್ಷನ್‌-1′ ಎಂದು ನಾಮಕರಣ ಮಾಡಲಾಗಿದೆ. ಅನೇಕ ವಿಶೇಷತೆ ಹೊಂದಿರುವ ಈ ತಳಿಯನ್ನು ಕಸಿ ಮಾಡಿ, ಚಿಂತಾಮಣಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಆಸಕ್ತ ರೈತರಿಗೆ ಮಾರಾಟ ಮಾಡಲಾಗುತ್ತಿದೆ.
ಡಾ.ಪಿ.ವೆಂಕಟರಮಣ, ವಿಜ್ಞಾನಿ, ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿ

ಜಮೀನಿನಲ್ಲಿ 100 ಗಿಡಗಳನ್ನು ಬೆಳೆಯಲಾಗಿದೆ. ಈಗಾಗಲೇ 10 ವರ್ಷಗಳ ಹಿಂದೆ ನೆಟ್ಟಂತ 50 ಗಿಡಗಳು ಫ‌ಲ ಕೊಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತಿದೆ. ಈ ಬಾರಿ 3.50 ಲಕ್ಷ ರೂ.ಗೆ ಹಣ್ಣನ್ನು ಮಾರಾಟ ಮಾಡಲಾಗಿದೆ. ಒಂದು ಮರ ಸರಿಸುಮಾರು 300 ಕೆಜಿ ಹಣ್ಣು ಬಿಡುತ್ತಿದೆ. ಬೇರೆ ಹಣ್ಣುಗಳಿಗೆ ಹೋಲಿಸಿದರೆ ಈ ತಳಿಯ ಜಂಬು ನೇರಳೆ ಉಪಯುಕ್ತ.- ಚೌಡಾರೆಡ್ಡಿ, ಪ್ರಗತಿಪರ ರೈತ, ಚಿಂತಾಮಣಿ

ಕೃಪೆ:ಉದಯವಾಣಿ

Domestic,near 4 years before purple , delicious new breed ,Chintamani Selection-1.