ಆ.6ಕ್ಕೆ ಬೆಂಗಳೂರಿನಲ್ಲಿ ಕೆಪಿಎಲ್‌ ಹರಾಜು

0
2313

ಬೆಂಗಳೂರು: ಆರನೇ ಆವೃತ್ತಿ ಕೆಪಿಎಲ್‌ಗೆ (ಕರ್ನಾಟಕ ಪ್ರೀಮಿಯರ್‌ ಲೀಗ್‌) ಸಿದ್ಧತೆ ಆರಂಭವಾಗಿದೆ. ಆಗಸ್ಟ್‌ 6ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ. ಸಪ್ಟೆಂಬರ್‌ನಲ್ಲಿ ಕೂಟ ಶುರುವಾಗಲಿದೆ. ಆದರೆ ದಿನಾಂಕವಿನ್ನೂ ಅಧಿಕೃತಗೊಂಡಿಲ್ಲ.

ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸಂಜಯ್‌ ದೇಸಾಯಿ ತಿಳಿಸಿದರು. ಈ ವೇಳೆ ಮಾತನಾಡಿದ ಅವರು, ಕೆಪಿಎಲ್‌ 6ನೇ ಆವೃತ್ತಿ ಸಂಪೂರ್ಣ ಹೊಸತನದಿಂದ ಕೂಡಿರಲಿದೆ. ಕಲ್ಯಾಣಿ ಮೋಟಾರ್ ಹೊಸ ಫ್ರಾಂಚೈಸಿಯಾಗಿ ಸೇರ್ಪಡೆಗೊಂಡಿದೆ. ಮಂಗಳೂರು ಯುನೈಟೆಡ್‌, ಕಿಚ್ಚ ಸುದೀಪ್‌ ನಾಯಕತ್ವದ ರಾಕ್‌ಸ್ಟಾರ್ಸ್‌ ತಂಡ ಕೂಟದಿಂದ ಹಿಂದೆ ಸರಿದಿರುವುದು ಭಾರೀ ಹೊಡೆತವಾಗಿದೆ. ಉಳಿದಂತೆ ಬಿಜಾಪುರ ಬುಲ್ಸ್‌, ಬೆಳಗಾವಿ ಪ್ಯಾಂಥರ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್, ಮೈಸೂರು ವಾರಿಯರ್ ಹಾಗೂ ನಮ್ಮ ಶಿವಮೊಗ್ಗ ತಂಡಗಳು ಫ್ರಾಂಚೈಸಿಯಾಗಿ 6ನೇ ಆವೃತ್ತಿ ಕೆಪಿಎಲ್‌ನಲ್ಲಿ ಮುಂದುವರಿಯಲಿದ್ದಾರೆ.
ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್‌ ರಾವ್‌ ಮಾತನಾಡಿ, 2014ರ ಅನಂತರ ಮತ್ತೆ ಬೆಂಗಳೂರು ತಂಡ ಕೆಪಿಎಲ್‌ ಸೇರಿಕೊಂಡಿದೆ (ಹಿಂದಿನೆರಡು ಆವೃತ್ತಿಗಳಲ್ಲಿ ಇರಲಿಲ್ಲ). ಬೆಂಗಳೂರು ಫ್ರಾಂಚೈಸಿಯಾಗಿ ಕಲ್ಯಾಣಿ ಮೋಟಾರ್ಸ್‌ ಸೇರಿ ಕೊಂಡಿರುವುದು ನಮ್ಮ ಸಂತಸವನ್ನು ಹೆಚ್ಚಿಸಿದೆ. ಕೆಪಿಎಲ್‌ನಿಂದ ಹಲವಾರು ಆಟಗಾರರು ಮಿಂಚಿ ಐಪಿಎಲ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಸ್ಥಾನಗಳಿಸಲು ರಾಜ್ಯ ಕ್ರಿಕೆಟ್‌ ಆಟಗಾರರಿಗೆ ಇದೊಂದು ಅತ್ಯುತ್ತಮ ಅವಕಾಶ ಎಂದು ತಿಳಿಸಿದರು.
ಕಾರ್ಬನ್‌ ಮೊಬೈಲ್‌ ಸಮೂಹದ ಮುಖ್ಯಸ್ಥ ಸುಧೀರ್‌ ಹಸಿಜಾ, ಕೆಎಸ್‌ಸಿಎ ಸಹಾಯಕ ಕಾರ್ಯದರ್ಶಿ ಸಂತೋಷ್‌ ಮೆನನ್‌, ಚಿತ್ರ ನಟ ದಿಗಂತ್‌, ನಟಿಯರಾದ ಐಂದ್ರಿತಾ ರೇ, ಸಂಜನಾ ಹಾಗೂ ಶರ್ಮಿಳಾ ಮಾಂಡ್ರೆ, 7 ತಂಡಗಳ ಫ್ರಾಂಚೈಸಿ ಮುಖಂಡರು ಉಪಸ್ಥಿತರಿದ್ದರು.
ಈ ಬಾರಿ ಅಷ್ಟೂ ಆಟಗಾರರ ಹರಾಜು: ಕೆಪಿಎಲ್‌ 5 ಆವೃತ್ತಿ ವಿಭಿನ್ನವಾಗಿ ನಡೆಯಲಿದೆ. ಮುಕ್ತ ಹರಾಜಿನಲ್ಲಿ ಎಲ್ಲ ಆಟಗಾರರು ಮತ್ತೂಮ್ಮೆ ಹರಾಜಿಗೊಳಗಾಗಲಿದ್ದಾರೆ. ಎಲ್ಲ ಫ್ರಾಂಚೈಸಿಗಳು ತಮಗಿಷ್ಟದ ಆಟಗಾರರನ್ನು ಖರೀದಿಸಬಹುದು. ಹಿಂದಿನ ಬಾರಿಗಳಿಗೆ ಹೋಲಿಸಿದರೆ ಈ ಬಾರಿ ಹರಾಜಿಗೆ ಗರಿಷ್ಠ ಮಹತ್ವದ ಬಂದಿದೆ. ಐಪಿಎಲ್‌ಗೆ ವೇದಿಕೆಯಾಗಿರುವುದರಿಂದ ಪ್ರಮುಖ ಆಟಗಾರ ರಿಗಿರುವಷ್ಟೇ ಮಹತ್ವ, ಕಿರಿಯ ಆಟಗಾರರಿಗೂ ಇರಲಿದೆ.

ಕೃಪೆ:ಉದಯವಾಣಿ
kpl auction,in bangalore, on-oct 6